ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೆಟಜೋ಼ವ

ವಿಕಿಸೋರ್ಸ್ದಿಂದ

ಮೆಟಜೋವ ಪ್ರಾಣಿ ಸಾಮ್ರಾಜ್ಯದ ಎರಡು ಉಪಸಾಮ್ರಾಜ್ಯಗಳಲ್ಲಿ ಒಂದು. ಇದಕ್ಕೆ ಸೇರಿದ ಪ್ರಾಣಿಗಳು ಬಹುಕೋಶ ಜೀವಿಗಳು; ಇವುಗಳ ದೇಹದಲ್ಲಿ ವಿಭೇದಗೊಂಡ ಕೋಶಗಳುಂಟು. ಬಹುಕೋಶಿಜೀವಿಗಳನ್ನು ಏಕಕೋಶಿಯ ಜೀವಿಗಳಿಗೆ ಹೋಲಿಸಿದರೆ, ಏಕಕೋಶ ಜೀವಿಗಳು ವಿಭೇದನೆಯನ್ನು ಹೊಂದದ ಒಂದೇ ಕೋಶ ಅಥವಾ ಕೋಶಗಳ ಸಮೂಹವನ್ನು ಹೊಂದಿರುತ್ತದೆ. ಆದರೆ ಮೆಟಜೋವ ಗುಂಪಿನ ಪ್ರಾಣಿಗಳಲ್ಲಿ ವಿಭೇದನೆ ಹೊಂದದ ಕೋಶಗಳ ಹಲವು ಪದರಗಳಿದ್ದು ದೇಹ ಮುಂಭಾಗ ಮತ್ತು ಹಿಂಭಾಗ ಎಂಬ ವಿಭೇದನೆಯನ್ನೂ ವಿವಿಧ ಅಂಗಗಳನ್ನೂ ನರವ್ಯೂಹವನ್ನೂ ಪ್ರದರ್ಶಿಸುವುವು. ಏಕಕೋಶ ಜೀವಿಗಳಲ್ಲಿ (ಪ್ರೋಟೋಜೋವ) ಕೋಶಗಳು ಹೊರನೋಟಕ್ಕೆ ವಿಭೇದನೆಯಾದಂತಿದ್ದರೂ ಅವು ಇನ್ನೂ ಕೋಶೀಯ ಹಂತದಲ್ಲಿಯೇ ಇರುತ್ತವೆ. ಮೆಟಜೋವಗಳಲ್ಲಿ ಕೋಶಗಳ ಪದರಗಳಿದ್ದು ಹೊರಚರ್ಮ (ಎಕ್ಟೋಡರ್ಮ್) ವಾತಾವರಣದ ಏರಿಳಿತಗಳಿಂದ ರಕ್ಷಣೆಯನ್ನೂ ನೀಡಲು ಹಾಗೂ ಜ್ಞಾನವಾಹಕ ಅಂಗವಾಗಿಯೂ ಕೆಲಸ ಮಾಡುತ್ತದೆ. ಒಳಚರ್ಮ (ಎಂಡೊಡರ್ಮ್) ಪಚನಾಂಗವಾಗಿ ಮಾರ್ಪಾಡಾಗಿದೆ. ನಡುಚರ್ಮ (ಮೀಸೊಡರ್ಮ್) ವಿಸರ್ಜನಾಂಗ, ಪರಿಚಲನಾಂಗ ಹಾಗೂ ಪ್ರಜನನಾಂಗಗಳಾಗುತ್ತವೆ. ಮೆಟಜೋವಗಳ ಇನ್ನೊಂದು ಮುಖ್ಯಗುಣವೆಂದರೆ ಭ್ರೂಣದ ಬೆಳವಣಿಗೆ. ನಿಶೇಚಿತ ಅಂಡ ಅಥವಾ ಜೈಗೋಟು ಒಂದೇ ಕೋಶವಾಗಿದ್ದು ವಿಭಜನೆಗೊಳ್ಳುತ್ತ ಹಂತಹಂತವಾಗಿ ಬೆಳೆಯುತ್ತ ರೂಪದಲ್ಲಿ ಬದಲಾವಣೆ ಹೊಂದಿ ಪ್ರಬುದ್ಧ ಮೆಟಜೋವ ಆಗುತ್ತದೆ. ಮೆಟಜೋವದ ದೇಹ ಕಾಯಭಾಗ ಮತ್ತು ಲಿಂಗಭಾಗ ಅಥವಾ ಜನನಭಾಗ ಎಂದು ವಿಭೇದನೆಗೊಂಡಿರುತ್ತದೆ. ಕಾಯಭಾಗ ಮತ್ತು ಲಿಂಗಭಾಗ ಹಲವಾರು ಜೈವಿಕ ಕ್ರಿಯೆಗಳನ್ನೊಳಗೊಂಡು ನಿರ್ದಿಷ್ಟಕಾಲದ ತನಕ ಕೆಲಸಮಾಡಿ ಅನಂತರ ಸಾಯುತ್ತದೆ. ಲಿಂಗಭಾಗ ಕಾಯದಭಾಗದ ಮೇಲೆ ಪರತಂತ್ರ ಜೀವನವನ್ನು ನಡೆಸುತ್ತಿದ್ದು ನಿಯಮಿತಕಾಲದಲ್ಲಿ ಆಯಾ ಜೀವಿಗಳ ಹಲವಾರು ಪ್ರತಿಗಳನ್ನು ತಯಾರಿಸುತ್ತದೆ. ಒಂದು ದೃಷ್ಟಿಯಲ್ಲಿ ಲಿಂಗಭಾಗ ಚಿರಂಜೀವಿ.

ಮೆಟಜೋವಗಳ ರಚನೆಯಲ್ಲಿ ಜಟಿಲತೆಯ ವಿವಿಧ ಹಂತಗಳುಂಟು. ಕೆಲವು ಮೆಟಜೋವಗಳು ಕಡಿಮೆ ಜಟಿಲತೆಯನ್ನೂ ಮತ್ತೆ ಕೆಲವು ಮೆಟಜೋವಗಳು ಸಾಕಷ್ಟು ಜಟಿಲತೆಯನ್ನೂ ಹೊಂದಿರುತ್ತವೆ. ಜಟಿಲತೆಯ ವಿವಿಧ ಹಂತಗಳು, ಗರಿಷ್ಠ ಪ್ರಾಣಿಗಳು ಕನಿಷ್ಠ ಪ್ರಾಣಿಗಳಿಂದ ವಿಕಾಸ ಹೊಂದಿರುವ ವಿವಿಧ ಹಂತಗಳನ್ನು ತೋರಿಸುತ್ತವೆ ಎಂದು ನಂಬಲಾಗಿದೆ. ಬಹುಶಃ ಮೊಟ್ಟಮೊದಲ ಮೆಟಜೋವ ಕೇವಲ ಹೊರಚರ್ಮ ಮತ್ತು ಒಳಚರ್ಮ ಎಂಬ ಕೋಶಪದರಗಳನ್ನು ಹೊಂದಿದ್ದು ಯಾವುದೇ ಅಂಗಗಳಿಲ್ಲದೆ ವಿಭೇದನೆಯನ್ನು ಹೊಂದದೇ ಇರುವಂಥ ಪ್ರಾಣಿಯಾಗಿರಬೇಕು. ಈ ಪ್ರಾಣಿಯಲ್ಲಿ ವಿಭೇದನೆಯಾದರೆ ಕೆಲವು ಲೈಂಗಿಕ ಕೋಶಗಳು ಮಾತ್ರ ಇತರ ಭಾಗಗಳಿಂದ ಬೇರ್ಪಟ್ಟಿರಬೇಕೆಂದು ಊಹಿಸಲಾಗಿದೆ. ಗ್ರಂಥಿ, ಮಾಂಸಖಂಡ, ಬಂಧ ಅಂಗಾಂಶ, ನರಕೋಶ ಮುಂತಾದವು ಬಹುಶಃ ಅನಂತರದ ಬೆಳೆವಣಿಗೆಯಾಗಿರಬೇಕು. ಈ ಹಂತವನ್ನು ಸ್ಪಂಜು ಪ್ರಾಣಿಗಳಲ್ಲಿ ಹಾಗೂ ಕುಟುಕು ಕಣವಂತಗಳಲ್ಲಿ (ಸೀಲೆಂಟರೇಟ) ಕಾಣಬಹುದು. ತರುವಾಯ ನಡುಚರ್ಮವೊಂದು (ಮೀಸೊಡರ್ಮ್) ಹೊರಚರ್ಮ ಮತ್ತು ಒಳಚರ್ಮಗಳ ಮಧ್ಯೆ ಬೆಳೆದು ಪ್ರಾಣಿಗಳು ಮೂರು ಪದರಗಳುಳ್ಳ ಶರೀರವನ್ನು ಪಡೆಯುವಂತಾಗಿರಬೇಕು. ನಡುಚರ್ಮದಿಂದ ಹಲವಾರು ಅಂಗಗಳು ರೂಪುಗೊಳ್ಳುವುದು. ಮಾಂಸಖಂಡ, ಪರಿಚಲನಾಂಗ, ವಿಸರ್ಜನಾಂಗ, ಪ್ರಜನನಾಂಗ, ಮುಂತಾದವು ಮಧ್ಯಚರ್ಮದಿಂದ, ಹೊರಚರ್ಮದಿಂದ ಚರ್ಮ, ನರಮಂಡಲ ಹಾಗೂ ಅದಕ್ಕೆ ಸಂಬಂಧಿಸಿದ ಅಂಗಗಳೂ ಒಳಚರ್ಮದಿಂದ ಅನ್ನನಾಳವೂ ರೂಪುಗೊಳ್ಳುತ್ತದೆ. ಚಪ್ಪಟೆಹುಳುಗಳು ಈ ಹಂತದಲ್ಲಿರುವ ಪ್ರಾಣಿಗಳು. ಚರ್ಮ ಮತ್ತು ಅನ್ನನಾಳದ ಮಧ್ಯೆ ಅವಕಾಶವೊಂದು ರಚಿತವಾಗಿ ಈ ಅವಕಾಶದಲ್ಲಿ ಹಲವು ಮುಖ್ಯ ಅಂಗಗಳು ಸೇರಿಕೊಂಡಿವೆ. ಇದರೊಂದಿಗೆ ಶರೀರ ವಲಯಗಳಾಗಿ ವಿಭಾಗಗೊಂಡಿದೆ. ವಲಯವಂತ, ಸಂಧಿಪದಿ, ಮೃದ್ವಂಗಿ ಮತ್ತು ಕಂಟಕಚರ್ಮಿಗಳು (ಎಕೈನೋಡರ್ಮೇಟ) ಈ ಗುಂಪಿಗೆ ಸೇರಿದ ಪ್ರಾಣಿಗಳು. ಈ ಜೀವಿಗಳು ಇನ್ನೂ ಸಂಕೀರ್ಣಗೊಳ್ಳುತ್ತಾ ಹೋಗಿ ಬೆನ್ನೆಲುಬನ್ನು ಪಡೆದು ಕಶೇರುಕಗಳ ವಿಕಾಸಕ್ಕೆ ಹಾದಿಮಾಡಿಕೊಟ್ಟಿದೆ. ಮೆಟಜೋವಗಳ ಉಗಮದ ಬಗ್ಗೆ ಕೆಲವು ಪರಿಕಲ್ಪನೆಗಳಿವೆ. ಸಮೂಹ ಜೀವನ ನಡೆಸುವ ಏಕಕಣಜೀವಿ, ಭಿತ್ತಿರಹಿತ ಕೋಶಗಳನ್ನು ಹೊಂದಿರುವ ಏಕಕಣಜೀವಿ ಹಾಗೂ ಮೆಟಫೈಟಗಳಿಂದ ಉಗಮಿಸಿರ ಬಹುದೆಂಬ ಪರಿಕಲ್ಪನೆಗಳು ಹೆಚ್ಚು ಪ್ರಚಲಿತ. ಹೆಕೆಲನ ಪ್ರಕಾರ ಟೊಳ್ಳು ಚೆಂಡಿನಂತಿರುವ ಹಾಗೂ ಕಶಾಂಗಗಳನ್ನು ಪಡೆದಿರುವ ವಾಲ್‍ವಾಕ್ಸನಂಥ ಜೀವಿಯಿಂದ ಮೆಟಜೋವಗಳು ಉಗಮಿಸಿವೆ. ಇಂಥ ಜೀವಿಗೆ ಹೆಕಲ್ `ಬ್ಲಾಸ್ಟಿಯ ಎಂದು ಕರೆದ. ಹೆಕೆಲನ `ಜೀವಾನುವಂಶೀಯ (ಬಯೋಜೆನಿಟಿಕ್) ತತ್ತ್ವದ ಪ್ರಕಾರ ಪ್ರಾಣಿಗಳ ಬೆಳವಣಿಗೆಯ ಹಂತಗಳು ಅವುಗಳ ವಿಕಾಸದ ಹಂತಗಳನ್ನು ಪ್ರತಿನಿಧಿಸುತ್ತವೆ. ಮೆಟಜೋವಪ್ರಾಣಿಗಳ ಜೀವನಚರಿತ್ರೆಯಲ್ಲಿ ಕಂಡುಬರುವ ಬ್ಲಾಸ್ಟುಲಾ ಹಂತ ಈ ಬ್ಲಾಸ್ಟಿಯ ಹಂತಕ್ಕೆ ಸಮನಾದುದು. ಕೋಶಗಳ ಒಂದು ಪದರವನ್ನು ಹೊಂದಿರುವ ಬ್ಲಾಸ್ಟಿಯ ಎರಡು ಪದರಗಳನ್ನು ಪಡೆದರೆ ಸರಳಮೆಟಜೋವಲಾ ಆದಂತಾಯಿತು. ಇದರ ಜೊತೆಯಲ್ಲಿ ಸಂರಕ್ಷಣೆ, ಚಲನೆ ಹಾಗೂ ಪಚನ ಕ್ರಿಯೆಗೆ ಕೋಶಗಳ ವಿಭೇದನೆಯಾಗಬೆಕು. ಹೆಕೆಲನ ಪ್ರಕಾರ ಹೊರಚರ್ಮ ಒಳತಿರುವಿಕೆಗೊಂಡಿರುವುದರಿಂದ ಆ ಪ್ರಾಣಿ, ಕೋಶಗಳ ಎರಡು ಪದರಗಳನ್ನು ಪಡೆಯಿತು. ಇದರೊಂದಿಗೆ ಬಾಯಿಯ ರಚನೆಯೂ ಆಯಿತು. ಹೆಕೆಲನು ಈ ಪ್ರಾಣಿಯನ್ನು `ಗ್ಯಾಸ್ಟ್ರಿಯ ಎಂದು ಕರೆದ. ಇದು ಮೆಟಜೋವ ಜೀವನ ಚರಿತ್ರೆಯಲ್ಲಿ ಬರುವ ಗ್ಯಾಸ್ಟ್ರುಲಾ ಹಂತಕ್ಕೆ ಸಮನಾದುದು. ಮೆಚ್ನಿಕಾಫ್‍ನ ಪ್ರಕಾರ ಪುರಾತನ ಮೆಟಜೋವ ಟೊಳ್ಳಿರದ ಗುಂಡಿನಂತಿರುವ ಪ್ಯಾರಂಕೈಮುಲಾದಂತಿತ್ತು. ಈ ಪ್ಯಾರಂಕೈಮುಲಾ ಸ್ಪಂಜು ಪ್ರಾಣಿಗಳ ಲಾರ್ವವನ್ನು ಹೋಲುತ್ತಿತ್ತು. ಟೊಳ್ಳಾಗುವುದು ಮತ್ತು ಬಾಯಿಯ ರೂಪುಗೊಳ್ಳುವಿಕೆಗಳು ದ್ವಿತೀಯಕ ಬೆಳೆವಣಿಗೆ. ಆದರೆ ಇದಕ್ಕೆ ಪೂರ್ತಿ ಪುಷ್ಟಿದೊರೆಯಲಿಲ್ಲ. ಇನ್ನು ಕೆಲವರು ಮೆಟಜೋವ ಪ್ರೋಟಿರೊಸ್ಪಾಂಜೀಯ ಎಂಬ ಪ್ರಾಣಿಯಿಂದ ಉದ್ಭವಿಸಿತು ಎಂದು ಊಹಿಸುತ್ತಾರೆ. .

   ಕೆಲವು ಕಾಲ ಹೆಕೆಲನ ವಾದವೇ ಎಲ್ಲರಿಗೂ ಒಪ್ಪಿಗೆಯಾಗಿ ಅದು ಬಳಕೆಯಲ್ಲಿತ್ತು. ಇದಕ್ಕೆ ವಿರೋಧಗಳು ಇವೆ. ಒಳಚರ್ಮ ಮೆಟಜೋವಗಳ ಬೆಳೆವಣಿಗೆಯಲ್ಲಿ ಒಳತಿರುವಿಗಿಂತ ಬೇರೆ ವಿಧಾನದಲ್ಲಿ ಉದ್ಭವಿಸುತ್ತದೆಂದು ತರ್ಕಿಸುತ್ತಾರೆ.  ಪುರಾತನ ಜೀವಿಗೆ ಅತಿ ಹತ್ತಿರದಸಂಬಂಧಿ ಎನ್ನಲಾದ ಕಂಟಕಚರ್ಮಿಗಳಲ್ಲಿ ಕೂಡ ಒಳತಿರುವಿಕೆಯಿಂದ ಗ್ಯಾಸ್ಟ್ರುಲಾ ಹಂತದ ನಿರ್ಮಾಣವಾಗುವುದಿಲ್ಲ.  ಆದ್ದರಿಂದ ಕೆಲವು ಜೀವವಿಜ್ಞಾನಿಗಳು ಮೆಚ್ನಿಕಾಫನ ವಾದವನ್ನು ಒಪ್ಪುತ್ತಾರೆ.

  ಹೈಮನ್ನಳ ಪ್ರಕಾರ ಟೊಳ್ಳು ಚೆಂಡಿನಂತಿದ್ದು, ಕಶಾಂಗಗಳನ್ನು ಹೊಂದಿರುವ ಸಮೂಹ ಜೀವನ ಜೀವಿಯಿಂದ ಮೆಟಜೋವಗಳ ಉದಯವಾಗಿರಬೇಕು.  ಈ ಪ್ರಾಣಿಗಳಲ್ಲಿ ಮೊಟ್ಟಮೊದಲ ವಿಭೇದನ ಎಂದರೆ ಕಾಯ ಮತ್ತು ಲಿಂಗಭಾಗಗಳು.  ಚಲಿಸುವ ಕೆಲವು ಕೋಶಗಳು ಪಚನಕ್ಕೆ ಸಂವೇದನೆಗೆ ವಿಭೇದನೆ ಹೊಂದಿ ಇವು ಪ್ಯಾರಂಕೈಮುಲಾ ಅಥವಾ ಸ್ಟೀರಿಯೋ ಗ್ಯಾಸ್ಟ್ರುಲಾ ಅಗಿರಬೇಕು.  ಈ ಜೀವಿಯ ಹೊರಾವರಣದಲ್ಲಿರುವ ಕೋಶಗಳು ಆಹಾರ ಸಂಗ್ರಹಿಸಿ ಒಳ ತಳ್ಳುತ್ತಿದ್ದವು.  ಅಲ್ಲಿ ಅಮೀಬಗಳಂಥ ಕೋಶಗಳಿಂದ ಪಚನ ನಡೆಯುತ್ತಿದ್ದಿರಬೇಕು.  ಲಿಂಗ ಶರೀರದ ಒಳಭಾಗಕ್ಕೆ ಚಲಿಸಿ ಮುಂಭಾಗದ ಕೆಲವು ಸಂವೇದನಾ ಕೋಶಗಳನ್ನು ಅಥವಾ ಕಶಾಂಗಗಳನ್ನು ಹೊಂದಿರಬೇಕು.  ಇಂಥ ಪ್ರಾಣಿಯಿಂದ ಮೆಟಜೋವಗಳು ಉದಯವಾದವು.  ಈಗ ಹೈಮನ್ನಳ ಸಿದ್ಧಾಂತ ಬಹುಜನರ ಒಪ್ಪಿಗೆ ಪಡೆದಿದೆ.					         (ಎಸ್.ಎನ್.ಎಚ್.)